ಇಂಡಿಯದ ಹೆಬ್ಬಾಗಿಲು-
ಬ್ರಿಟಿಷ್ ದೊರೆಯಾದ ಐದನೆಯ ಜಾರ್ಜ್ ಮತ್ತು ರಾಣಿ ಮೇರಿ ಇವರು ಭಾರತಕ್ಕೆ 1891 ಡಿಸೆಂಬರ್ ತಿಂಗಳಲ್ಲಿ ಭೇಟಿ ಕೊಟ್ಟಿದ್ದರ ಜ್ಞಾಪಕಾರ್ಥವಾಗಿ ಬೊಂಬಾಯಿ ನಗರದ ಸಮುದ್ರ ತೀರದಲ್ಲಿ ಭವ್ಯವಾಗಿ ಕಟ್ಟಿರುವ ಕಟ್ಟಡ (ಗೇಟ್ ವೇ ಆಫ್ ಇಂಡಿಯ). ಈ ಕಟ್ಟಡ ಇರುವ ಸ್ಥಳ ಮೊದಲಿನಿಂದಲೂ ಸಮುದ್ರ ಸಂಚಾರಿಗಳಿಗೆ ಬಂದರಾಗಿಯೂ ಗುರುತಿನ ಸ್ಥಳವಾಗಿಯೂ ಇತ್ತು. ಪ್ರಯಾಣಿಕರ ಉಪಯೋಗಕ್ಕಾಗಿ ಅಲ್ಲಿ ಮೊಗಲ್ ರೀತಿಯ ಒಂದು ಸಣ್ಣ ಕಟ್ಟಡವನ್ನು ಕಟ್ಟಿದ್ದರು. ಅನಂತರ ಬ್ರಿಟಿಷ್ ರಾಜರಾಣಿಯರನ್ನು ಸ್ವಾಗತಿಸುವ ಸಲುವಾಗಿ ಅದನ್ನು ತೆಗೆದು ತಾತ್ಕಾಲಿಕವಾದ ಮಂಟಪವನ್ನೂ ಸಭಾಂಗಣವನ್ನೂ ಕಟ್ಟಿಸಿದರು. ಅನಂತರ ಬ್ರಿಟಿಷ್ ಶಿಲ್ಪಿ ಜಿ. ವಿಟೆಟ್ ಎಂಬುವನು ಈಗಿರುವ ಕಟ್ಟಡ ನಿರ್ಮಿಸಿದ. ಇದು ಹದಿನಾರನೆಯ ಶತಮಾನದ ಗುಜರಾತೀ ಶೈಲಿಯಲ್ಲಿದ್ದು ಹಿಂದೂ ಮತ್ತು ಮುಸ್ಲಿಂ ಮಾರ್ಗಗಳ ಸಮ್ಮಿಳನಕ್ಕೊಂದು ಸಾಕ್ಷಿಯಾಗಿದೆ. ಬೊಂಬಾಯಿಯ ಹತ್ತಿರ ಸಿಗುವ, ಹಳದಿ ಅಗ್ನಿಶಿಲೆಗಳನ್ನು (ಎಲ್ಲೊ ಬೆಸಾಲ್ಟ್) ಕಟ್ಟಡಕ್ಕೆ ಬಳಸಲಾಗಿದೆ. ಕಮಾನುಗಳಿಗೆ ಉಪಯೋಗಿಸಿರುವ ಕಲ್ಲುಗಳು ಗ್ವಾಲಿಯರ್‍ನಿಂದ ತರಿಸಿದವು. ಈ ಸ್ಮಾರಕದ ಆರಂಭೋತ್ಸವವನ್ನು 1924ರ ಡಿಸೆಂಬರ್ 24ರಂದು ಆಗಿನ ವೈಸ್‍ರಾಯ್ ಆರ್ಲ್ ರೀಡಿಂಗ್ ನೆರವೇರಿಸಿದ. ಬೊಂಬಾಯಿಯ ಜನರಿಗೂ ಪ್ರವಾಸಿಗಳಿಗೂ ಪ್ರಿಯವಾದ ವಿಹಾರಸ್ಥಳ.			    
 (ಎಚ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ